Breaking News

ಅಬೂಬಕರ್ ಸಿದ್ದೀಕ್(ರ) ಅವರಿಗೆ ಅಲ್ಲಾಹನು ನೀಡಿದ 5 ಮಹಾನ್ ಅನುಗ್ರಹಗಳು

ಸಂದೇಶ ಮ್ಯಾಗಝಿನ್ : ಅಬೂಬಕರ್ ಸಿದ್ದೀಕ್ (ರ) ಅವರು ಪ್ರವಾದಿ ಮುಹಮ್ಮದ್(ಸ) ರವರ ಬಾಲ್ಯಕಾಲದ ಸ್ನೇಹಿತ. ಅವರು ಮಕ್ಕಾದ ಕುರೈಶ್ ಬುಡಕಟ್ಟಿನ ಬನೂ ತಮೀಮಿ ಗೋತ್ರದ ವ್ಯಕ್ತಿ. ಬಾಲ್ಯದಲ್ಲೇ ಪ್ರವಾದಿ ಮುಹಮ್ಮದ್(ಸ)ರಿಗೆ ಅಬೂಬಕರ್ ಅಂದರೆ ಪ್ರಾಣ. ಅಬೂಬಕ್ ಸಿದ್ದೀಕ್ (ರ) ರಿಗೆ ಅಬೂ ಕುಹಾಫಾ ಎಂಬ ಹೆಸರೂ ಇದೆ. ಅದೂ ಅಲ್ಲದೆ, ತಮ್ಮ ಸ್ನೇಹ ಕಾರಣದಿಂದ ಅಬೂಬಕರ್ ಸಿದ್ದೀಕ್(ರ) ಅವರು ಪ್ರವಾದಿ ಮುಹಮ್ಮದ್ (ಸ) ರಿಗೆ ತಮ್ಮ ಮಗಳು ಆಯಿಶಾ ಸಿದ್ಧೀಕಾ(ರ) ಅವರನ್ನು ವಿವಾಹ ಮಾಡಿ ಕೊಟ್ಟಿದ್ದರು. ಇವರು ಇಸ್ಲಾಮಿನ ಪ್ರಥಮ ಖಲೀಫಾ ಕೂಡಾ ಹೌದು. ಇವರಿಗೆ ಅಲ್ಲಾಹನು ಇಸ್ಲಾಮಿನಲ್ಲಿ ಅಪಾರ ಅನುಗ್ರಹಗಳನ್ನು ನೀಡಿದ್ದಾನೆ. ಅವುಗಳನ್ನು ಒಂದೊಂದಾಗಿ ನೋಡೋಣ ಬನ್ನಿ.

1. ಪುರುಷರಲ್ಲಿ ಪ್ರಥಮವಾಗಿ ಇಸ್ಲಾಮ್ ಸ್ವೀಕಾರ ಮಾಡಿದ ವ್ಯಕ್ತಿ:

ಪ್ರವಾದಿ ಮುಹಮ್ಮದ್(ಸ)ರವರು ಅಲ್ಲಾಹನ ಪ್ರವಾದಿಯಾಗಿ ನಿಯೋಜನೆಗೊಂಡಾಗ ಪ್ರಥಮವಾಗಿ ಮಕ್ಕಾದಲ್ಲಿ, ತಮ್ಮ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಇಸ್ಲಾಮ್ ಬೋಧಿಸಿದರು. ಈ ಬೋಧನೆಯಿಂದ ಪ್ರೇರಿತರಾದ ಅಬೂಬಕರ್ ಸಿದ್ಧೀಕ್(ರ)ರವರು ಇಸ್ಲಾಮ್ ಸ್ವೀಕಾರ ಮಾಡಿದರು. ಹೀಗೆ ಮಕ್ಕಾದಲ್ಲಿ ವಯಸ್ಕ ಪುರುಷರಲ್ಲಿ ಪ್ರಥಮವಾಗಿ ಇಸ್ಲಾಮ್ ಸ್ವೀಕಾರ ಮಾಡಿದ ವ್ಯಕ್ತಿ ಅಬೂಬಕರ್ ಸಿದ್ಧೀಕ್ ಆಗಿದ್ದಾರೆ. ಈ ಕಾರಣದಿಂದಾಗಿ ಪ್ರವಾದಿ ಮುಹಮ್ಮದ್ (ಸ)ರವರು ತಮ್ಮ ಇಬ್ಬರು ಸ್ನೇಹಿತರಾದ ಅಬೂಬಕರ್ (ರ) ಮತ್ತು ಉಮರ್(ರ) ರವರಲ್ಲಿ ಅಬೂಬಕರ್ (ರ) ಗೆ ಪ್ರಥಮ ಆದ್ಯತೆ ನೀಡುತ್ತಿದ್ದರು.

pixabay

2. ಪ್ರಥಮವಾಗಿ ಇಸ್ಲಾಮನ್ನು ಪ್ರಚಾರ ಮಾಡಿದ ಪ್ರವಾದಿಯೇತರ ವ್ಯಕ್ತಿ:

ಅಬೂಬಕರ್ ಸಿದ್ಧೀಕ್(ರ)ರವರು ಇಸ್ಲಾಮ್ ಸ್ವೀಕಾರ ಮಾಡಿದ ಬಳಿಕ ಅವರು ತಮ್ಮ ಸಾಮಾಜಿಕ ಪ್ರಭಾವವನ್ನು ಬಳಸಿ ಮಕ್ಕಾದ ಅನೇಕ ಗಣ್ಯವ್ಯಕ್ತಿಗಳನ್ನು ಭೇಟಿ ಮಾಡಿ ಅವರನ್ನು ಇಸ್ಲಾಮಿಗೆ ಆಹ್ವಾನಿಸಿದರು. ಈ ರೀತಿ ಅವರು ಪ್ರಥಮವಾಗಿ ಇಸ್ಲಾಮಿಗೆ ಆಹ್ವಾನಿಸಿದ ವ್ಯಕ್ತಿಗಳೆಂದರೆ ಉಸ್ಮಾನ್ ಬಿನ್ ಅಫ್ವಾನ್(ರ), ತಲ್ಹಾ(ರ), ಜುಬೇರ್(ರ) ಹಾಗೂ ಸೈದ್(ರ) ಆಗಿದ್ದಾರೆ. ಅಬೂಬಕರ್ ಸಿದ್ಧೀಕ್(ರ)ರವರ ಆಹ್ವಾನವನ್ನು ಸ್ವೀಕಾರ ಮಾಡಿದ ಇವರೆಲ್ಲ ಮುಸ್ಲಿಮರಾದರು. ಆ ಬಳಿಕ ಕುರೈಶ್ ಗಳಲ್ಲಿ ಪ್ರಮುಖರಾದ ಉಸ್ಮಾನ್ ಬಿನ್ ಮನ್ಝೂನ್(ರ), ಅಬೂ ಉಬೈದಾ(ರ), ಅಬ್ದುರ್ರಹ್ಮಾನ್ ಬಿನ್ ಔಫ್(ರ) ರವರನ್ನು ಭೇಟಿಯಾಗಿ ಅವರನ್ನು ಇಸ್ಲಾಮಿಗೆ ಆಹ್ವಾನಿಸಿದರು. ಅವರೂ ಕೂಡ ಈ ಆಹ್ವಾನವನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿ ಮುಸ್ಲಿಮರಾದರು.

3. ಇಸ್ಲಾಮಿನ ಪ್ರಥಮ ಖಲೀಫಾ:

ಪ್ರವಾದಿ ಮುಹಮ್ಮದ್(ಸ)ರ ಮರಣದ ನಂತರ ಇನ್ನು ನಮ್ಮನ್ನು ಮುನ್ನಡೆಸುವವರು ಯಾರು ಎಂಬ ಗೊಂದಲ ಮುಸಲ್ಮಾನರಲ್ಲಿತ್ತು. ಆ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್(ಸ)ರಿಗೆ ಅಬೂಬಕರ್ ಸಿದ್ಧೀಕ್(ರ)ರವರಷ್ಟು ಹತ್ತಿರವಾದ ಅನುಚರರು ಬೇರಾರೂ ಇರಲಿಲ್ಲ. ಪ್ರವಾದಿ ಮುಹಮ್ಮದ್(ಸ)ರ ನಂತರ ಮುಸ್ಲಿಮರ ನಾಯಕರಾಗಿ ಮದೀನಾದ ಅನ್ಸಾರಿ ಮತ್ತು ಮಕ್ಕಾದ ವಲಸಿಗ ಮುಹಾಜಿರೀನ್ ಸಹಾಬಿಗಳಲ್ಲಿ ಯಾರನ್ನು ಆರಿಸಬೇಕು ಎಂಬ ಗೊಂದಲವಿದ್ದಿದ್ದರೂ. ಅಂತಿಮವಾಗಿ ಮುಸ್ಲಿಮರ ನಾಯಕರಾಗಿ ಅಬೂಬಕರ್ ಸಿದ್ಧೀಕ್(ರ)ರವರು ಪ್ರವಾದಿ ಮುಹಮ್ಮದ್(ಸ)ರ ಉತ್ತರಾಧಿಕಾರಿಯಾಗಿ ಎಲ್ಲರ ಒಮ್ಮತದಿಂದ ಅಧಿಕಾರ ಸ್ವೀಕಾರ ಮಾಡಿದರು.

4. ಪ್ರವಾದಿ ಮುಹಮ್ಮದ್(ಸ)ರವರ ಅನುಪಸ್ಥಿತಿಯಲ್ಲಿ ಮದೀನಾ ಮಸೀದಿಯ ಇಮಾಮ್:

ಪ್ರವಾದಿ ಮುಹಮ್ಮದ್(ಸ)ರವರು ಮಕ್ಕಾದಿಂದ ಹಿಜ್ರತ್ ಮಾಡಿ ಬಂದ ನಂತರ ಅವರೇ ಸ್ವತಃ ಮದೀನಾದ ಮಸೀದಿಯಲ್ಲಿ ತನ್ನ ಸಂಗಾತಿಗಳಿಗೆ ನಮಾಝ್ ಮಾಡಲು ಇಮಾಮತ್ ನಿರ್ವಹಿಸುತ್ತಿದ್ದರು. ಆದರೆ ಪ್ರವಾದಿ ಯವರ ಜೀವನದ ಕೊನೆಯ ದಿನಗಳಲ್ಲಿ ಅವರು ರೋಗ ಪೀಡಿತರಾಗಿ ಮಸೀದಿಗೆ ಬರಲು ಕೂಡ ಅವರಿಗೆ ಸಾಧ್ಯವಾಗದೇ ಹೋದ ಸಂದರ್ಭದಲ್ಲಿ ಅವರು ತಮ್ಮ ಬದಲಿಗೆ ಇಮಾಮತ್ ನಿರ್ವಹಿಸಲು ಇನ್ನೊಬ್ಬರನ್ನು ಆಯ್ಕೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಅವರು ಅಬೂಬಕರ್ ಸಿದ್ಧೀಕ್(ರ)ರನ್ನು ಆಯ್ಕೆ ಮಾಡಿದರು.

5. ಮೊದಲ ಬಾರಿಗೆ ಪವಿತ್ರ ಕುರ್‌ಆನಿನ ಸಂಕಲನ:

ಅಬೂಬಕರ್ ಸಿದ್ಧೀಕ್(ರ)ರವರು ರಾಶಿದೂನ್ ಖಿಲಾಫತ್ ನ ಪ್ರಥಮ ಖಲೀಫರಾಗಿದ್ದಾಗ, ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮನಗಂಡು ಮತ್ತು ಕುರ್‌ಆನ್ ಕಂಠಪಾಠ ಮಾಡಿರುವ ವ್ಯಕ್ತಿಗಳ ಮರಣದ ಕಾರಣದಿಂದಾಗಿ ಮುಂದಿನ ತಲೆಮಾರಿಗೆ ಪವಿತ್ರ ಕುರ್‌ಆನನ್ನು ಸಂರಕ್ಷಿಸುವ ಸಲುವಾಗಿ ಕುರ್‍‍ಆನನ್ನು ಮೊದಲ ಬಾರಿ ಸಂಕಲನ ಮಾಡಲು ಉಮರ್(ರ)ರಿಗೆ ಆದೇಶಿಸಿದರು. ಇದು ಮುಂದಿನ ತಲೆಮಾರಿನ ಮುಸ್ಲಿಮರಿಗೆ ಕುರ್‌ಆನನ್ನು ಏಕರೂಪದಲ್ಲಿ ಓದಲು ಸಹಾಯಕವಾಯಿತು.

pixabay

ಈ ರೀತಿ ಅಬೂಬಕರ್ ಸಿದ್ಧೀಕ್(ರ)ರವರ ಜೀವನವನ್ನು ಅಲ್ಲಾಹನು ಮಹಾನ್ ಅನುಗ್ರಹಗಳಿಂದ ತುಂಬಿದ್ದಾನೆ. ಅದೂ ಅಲ್ಲದೆ ಅವರಿಗೆ ‘ಸಿದ್ಧೀಕ್’ ಅಂದರೆ ‘ಸತ್ಯವಂತ’ ಎಂಬ ಬಿರುದು ಕೂಡ ಇದೆ. ಅಬೂಬಕರ್ ಸಿದ್ಧೀಕ್(ರ) ಅವರ ವಿಶ್ವಾಸ(ಈಮಾನ್)ವನ್ನು ಪ್ರವಾದಿ ಮುಹಮ್ಮದ್(ಸ)ರವರು ಹಲವು ಬಾರಿ ಕೊಂಡಾಡಿದ್ದ ಸಂದರ್ಭ ಹದೀಸಿನಲ್ಲಿ ಕಾಣಬಹುದಾಗಿದೆ.

Leave a Reply