Breaking News
turki
Image Source : Google | Image by : Kohram News

ತುರ್ಕಿಯಲ್ಲಿ ಅರೇಬಿಕ್ ಆಝಾನ್ ಗೆ ನಿಷೇಧ ಹೇರಲಾಗಿತ್ತು!

ಸುದ್ದಿ ನಿಮಗೆ ಅಚ್ಚರಿ ತಂದಿರಬಹುದಾದರೂ ಇದು ಸತ್ಯ! ಹೌದು ಸುಮಾರು ಹದಿನೆಂಟು ವರ್ಷಗಳ ಕಾಲ ಟರ್ಕಿಶ್ ಜನರು ಆಝಾನ್ ಕರೆಯನ್ನು ಪ್ರವಾದಿ(ಸ) ಮತ್ತು ಅವರ ಸಂಗಾತಿಗಳ ಚರ್ಯೆಗೆ ವಿರುದ್ಧವಾಗಿ ತಮ್ಮದೇ ತುರ್ಕಿ ಭಾಷೆಯಲ್ಲಿ ಆಝಾನ್ ಕರೆಯನ್ನು ನೀಡುತ್ತಿದ್ದರು. ಒಂದುಕಾಲದ ಟರ್ಕಿಯ ಜಾತ್ಯಾತೀತ ಅಧ್ಯಕ್ಷನೆಂದು ಜಗತ್ತಿನಿಂದ ಕರೆಸಿಕೊಳ್ಳಲು ಹಂಬಲಿಸುತ್ತಿದ್ದ ಮುಸ್ತಫಾ ಕಮಾಲ್ ಅತಾತೂರ್ಕ್ ಅವರು 1932 ರಲ್ಲಿ ಅರೇಬಿಕ್ ಆಝಾನ್ ಗೆ ನಿಷೇಧ ಹೇರಿ ತುರ್ಕಿ ಭಾಷೆಯಲ್ಲೇ ಆಝಾನ್ ಕರೆ ನೀಡುತ್ತವಂತೆ ಆದೇಶ ಹೊರಡಿಸಿದ್ದರು.

ಮುಸ್ತಫಾ ಕಮಾಲ್ ಅತಾತೂರ್ಕ್

ಎಲ್ಲಿಯವರೆಗೆಂದರೆ ಅರೇಬಿಯಲ್ಲಿ ಹೇಳಲಾಗುವ `ಅಲ್ಲಾಹು ಅಕ್ಬರ್’ ನ್ನು ಕೂಡ ತುರ್ಕಿ ಭಾಷೆಯಲ್ಲಿ translation ಮಾಡಿ ಆಝಾನ್ ಕರೆಯನ್ನು ನೀಡಲಾಗುತ್ತಿತ್ತು. ತುರ್ಕಿ ಯ ಸಂಬಂಧವನ್ನು ಒಟ್ಟೋಮನ್ ಭೂತಕಾಲದೊಂದಿಗೆ ಕಡಿತಗೊಳಿಸಲು ಮತ್ತು ದೇಶವನ್ನು ಜಾತ್ಯತೀತಗೊಳಿಸಲು ಮುಸ್ತಫಾ ಕಮಾಲ್ ಅತಾತೂರ್ಕ್ ಅವರು ಕೈಗೊಂಡ ಅನೇಕ ಕ್ರಮಗಳಲ್ಲಿ ಅರೇಬಿಕ್ ಆಝಾನ್ ಅನ್ನು ನಿಷೇಧಿಸುವುದು ಕೂಡ ಒಂದಾಗಿತ್ತು. ಆದರೆ ಹೆಚ್ಚಿನ ತುರ್ಕಿಶ್ ಜನರಿಗೆ ಇದು ಇಷ್ಟವಾಗಿರಲಿಲ್ಲ. ಅಲ್ಲಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು.

ನಿಷೇಧದ ನಡುವೆಯೇ ಮುಂದುವರಿದ ಅರೇಬಿಕ್ ಆಝಾನ್

ಅಧ್ಯಕ್ಷರ ಆದೇಶದ ನಂತರವೂ ಕೂಡ ಕೆಲವರು ಅರೇಬಿಕ್ ಆಝಾನ್ ಕರೆಯನ್ನು ಮುಂದುವರಿಸಿದ್ದರು. ಆ ನಂತರ ಪ್ರತೀ ಮಸೀದಿಯ ಬಾಗಿಲಲ್ಲಿ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಲಾಯಿತು. ಯಾರದರೂ ಅರೇಬಿಕ್ ಅಝಾನ್ ಕರೆ ನೀಡಿ ಸಿಕ್ಕಿ ಬಿದ್ದಲ್ಲಿ ಮೂರು ತಿಂಗಳು ಜೈಲು ಹಾಗೂ ದಂಡ ವಿಧಿಸಲಾಗುತ್ತಿತ್ತು.

ದೇಶಾದ್ಯಂತ ಪ್ರತಿಭಟನೆಯ ಕಿಚ್ಚು

ಅರೇಬಿಕ್ ಆಝಾನ್ ವಿರುದ್ಧ ಸರಕಾರದ ಕ್ರಮ ಮತ್ತಷ್ಟು ಕಠಿಣವಾದಂತೆ, ಕೆಲವರು ದೇಶಾದ್ಯಂತ ಪ್ರವಾಸ ಮಾಡಿ ಅರೇಬಿಕ್ ಆಝಾನ್ ಕರೆ ನೀಡುವ ಮೂಲಕ ಪ್ರತಿಭಟಿಸಿದರು. ಇನ್ನು ಕೆಲವು ಪೋಷಕರು ತಮ್ಮ ಮಕ್ಕಳಿಗೆ ಅರೇಬಿಕ್ ಆಝಾನ್ ಅನ್ನು ಕಂಠ ಪಾಠ ಮಾಡಿಸುವ ಮೂಲಕ ಪ್ರತಿಭಟಿಸಿದರು. ಇದರಿಂದಾಗಿ ಹಲವು ಜೈಲು ಸೇರಬೇಕಾಯಿತು.

ದೇಶದ ಸಂಸತ್ತಿನಲ್ಲಿ ಮೊಳಗಿದ ಆಝಾನ್

1949 ರಲ್ಲಿ ಮುಹಿದ್ದೀನ್ ಎರ್ಟುರುಲ್ ಮತ್ತು ಉಸ್ಮಾನ್ ಯಾಜ್ ಎಂಬ ಇಬ್ಬರು ಯುವಕರು ಶಾಸಕಾಂಗ ಅಧಿವೇಶನ ನಡೆಯುತ್ತಿದ್ದಾಗ ಅಸೆಂಬ್ಲಿಯ ಗ್ಯಾಲರಿಯಿಂದ ಆಝಾನ್ ಕರೆಯನ್ನು ಮೊಳಗಿಸಿದರು. ಆ ನಂತರ ಅವರೂ ಕೂಡ ಕಾನೂನು ಕ್ರಮ ಎದುರಿಸಬೇಕಾಗಿ ಬಂತು.

ಹೊಸ ಸರಕಾರವು ಧಾರ್ಮಿಕ ಸ್ವಾತಂತ್ರ್ಯವನ್ನು ಪುನಃ ನೀಡಿತು

ಆ ನಂತರ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪ್ರಧಾನಿ ಅದ್ನಾನ್ ಮೆಂಡೆರೆಸ್ ಅವರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ, ”ತುರ್ಕಿ ದೇಶವು ಮುಸ್ಲಿಂ ರಾಷ್ಟ್ರವಾಗಿದೆ ಮತ್ತು ಅದು ಎಂದೆಂದಿಗೂ ಮುಸ್ಲಿಂ ರಾಷ್ಟ್ರವಾಗಿಯೇ ಉಳಿಯುತ್ತದೆ. ಈ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುವುದಿಲ್ಲ” ಎಂದು ಘೋಷಿಸಿದರು. ಇದರಿಂದಾಗಿ ತುರ್ಕಿಯಲ್ಲಿ ಮತ್ತೆ ಅರೆಬಿಕ್ ಆಝಾನ್ ಮೊಳಗಳು ಪ್ರಾರಂಭವಾದವು.

ರಮದಾನ್ ಮೊದಲ ದಿನವೇ ನಿಷೇಧ ಹಿಂತೆಗೆತ

ನೂತನ ಸರಕಾರದ ಆದೇಶವು 1950 ರ ಜೂನ್ 16 ರಂದು ಜಾರಿಗೆ ಬಂತು ಕಾಕತಾಳೀಯವೆಂಬಂತೆ ಆ ದಿನ ರಮದಾನ್ ಮೊದಲ ದಿನವಾಗಿತ್ತು. ತಮ್ಮ ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ ಎಂದು ಪ್ರತಿಭಟಿಸುತ್ತಿದ್ದ ಧಾರ್ಮಿಕ ವ್ಯಕ್ತಿಗಳಿಗೆ ರಮದಾನ್ ಮೊದಲ ದಿನವೇ ನಿಷೇಧವನ್ನು ತೆಗೆದು ಹಾಕಿದ್ದು ಅಪಾರ ಸಂತೋಷ ತಂದಿತ್ತು.

ತನ್ನನ್ನು ಮಹಾನ್ ಜಾತ್ಯಾತೀತವಾದಿ ಎಂದು ಕರೆಸಿಕೊಳ್ಳುವ ಜಿದ್ದಿಗೆ ಬಿದ್ದು ತುರ್ಕಿಯಲ್ಲಿ ಅನೇಕ ಅಚ್ಚರಿಯ ಆದೇಶಗಳನ್ನು ಜಾತಿಗೆ ತಂದಿದ್ದ ಮುಸ್ತಫಾ ಕಮಾಲ್ ಅತಾತೂರ್ಕ್ ಅವರ ಕಾಲದಲ್ಲಿ ತುರ್ಕಿಯಲ್ಲಿ ಒಟ್ಟೋಮನ್ ಕಾಲದ ಅನೇಕ ಮಸೀದಿಗಳನ್ನು ವಸ್ತು ಸಂಗ್ರಹಾಲಯಗಳಾನ್ನಾಗಿ ಪರಿವರ್ತಿಸಲಾಗಿತ್ತು. ಇದರಲ್ಲಿ ಒಂದು ಮಸೀದಿ ಇತ್ತೀಚೆಗೆ ಪುನಃ ಮಸೀದಿಯಾಗಿ ಪರಿವರ್ತನೆಗೊಂಡಿರುವ ‘ಹಗಿಯ ಸೋಫಿಯಾ’ ಆಗಿತ್ತು.

Leave a Reply