Breaking News
Twitter Image

ಮಗನಿಗಾಗಿ 1400 ಕಿಮೀ ಒಬ್ಬಂಟಿಯಾಗಿ ಸ್ಕೂಟರ್ ಚಲಾಯಿಸಿದ ತಾಯಿ ರಝಿಯಾ ಬೇಗಂ

2020ರ ಕೊರೋನಾ ಲಾಕ್‌ಡೌನ್‌ನಲ್ಲಿ ಜನರು ಹಲವಾರು ಪಾಡು ಪಟ್ಟದ್ದನ್ನು ನಾವೆಲ್ಲ ನೋಡಿದ್ದೆವೆ. ಕಾರ್ಮಿಕರು ನಡೆದು ಕೊಂಡೇ ಹೋಗಿ ಮನೆ ಸೇರಿದ್ದು, ಕೆಲವರು ಅನ್ನ ನೀರಿಲ್ಲದೆ ಸುಡು ಬಿಸಿಲಲ್ಲಿ ಪ್ರಾಣತೆತ್ತಿದ್ದು ನಾವು ಟಿವಿ ಪತ್ರಿಕೆಗಳಲ್ಲಿ ನೋಡಿದ್ದೇವೆ ಓದಿದ್ದೇವೆ. ತೆಲಂಗಾನದ ರಝಿಯಾ ಬೇಗಂ ಅವರದ್ದು ಕೂಡ ಇದೇ ರೀತಿಯ ಬವಣೆ. ತಾಯಿ ಹೃದಯ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಬಲ್ಲದು ಅಂತಾರಲ್ಲ ಅದು ಇಲ್ಲಿ ಅಕ್ಷರಶಃ ನಿಜವಾಗಿದೆ.

2020ರ ಮಾರ್ಚ್‌ನಲ್ಲಿ ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 500 ದಾಟಿದಾಗ ಪ್ರಧಾನಿ ನರೇಂದ್ರ ಮೋದಿಯವರು ಏಕಾಏಕಿ ದೇಶಾದ್ಯಂತ ಲಾಕ್ ಡೌನ್ ಹೇರಿದ್ದರು. ಪ್ರಯಾಣ ಸೌಕರ್ಯಗಳೆಲ್ಲ ಒಮ್ಮಿಂದೊಮ್ಮೆಲೆ ಬಂದ್ ಆದ ಕಾರಣ, ತಮ್ಮ ಕೆಲಸದ ನಿಮಿತ್ತ ಪರ ಊರಿಗೆ ತೆರಳಿದ್ದವರು ಅಲ್ಲೇ ಬಾಕಿ ಯಾಗುವಂತಾಗಿತ್ತು.

ತೆಲಂಗಾಣದ ನಾಝಿಮಾಬಾದ್‌ನ ಬೋಧಾನ್ ನಿವಾಸಿ ರಝಿಯಾ ಬೇಗಂ ಅವರ ಮಗ ನಿಝಾಮುದ್ದೀನ್ ಹೈದರಾಬಾದ್ ನಲ್ಲಿ ಕಲಿಯುತ್ತಿದ್ದ. ಮಾರ್ಚ್ 12ರಂದು ಸ್ನೇಹಿತನ ತಂದೆಗೆ ಹುಷಾರಿಲ್ಲ ಎಂದು ಆಂಧ್ರ ಪ್ರದೇಶದ ನೆಲ್ಲೂರ್ ಗೆ ತೆರಳಿದ್ದ, ಅಚಾನಕ್ ಆದ ಲಾಕ್ ಡೌನಿಂದಾಗಿ ಆತನಿಗೆ ಊರಿಗೆ ಮರಳಲು ಸಾಧ್ಯವಾಗಿಲ್ಲ. ಇತ್ತ ತಾಯಿ ರಝಿಯಾರವರು ಮಗನ ಕಾರಣಕ್ಕೆ ಚಿಂತಾಕ್ರಾಂತರಾಗಿದ್ದರು.

ಕೊನೆಗೆ ಹೇಗೋ ಧೈರ್ಯ ಮಾಡಿ ತನ್ನ ಮಗನನ್ನು ವಾಪಾಸ್ ಕರೆತರುವ ಯೋಜನೆ ರೂಪಿಸಿದ ರಝಿಯಾರವರು, ಇದಕ್ಕಾಗಿ ಪೊಲೀಸರ ಪ್ರಮಾಣ ಪತ್ರವನ್ನೂ ಪಡೆದರು. ಭೋಧಾನದ ಎಸಿಪಿ ಜೈಪಾಲ್ ರೆಡ್ಡಿಯವರು ಈ ಕಾರ್ಯದಲ್ಲಿ ರಝಿಯಾರಿಗೆ ಸಹಾಯ ಮಾಡಿದ್ದಾರೆ. ಏಪ್ರಿಲ್ 5 ರಂದು ಭೋಧಾನದಿಂದ ಸ್ಕೂಟರ್ ನಲ್ಲಿ ಹೊರಟ ರಝಿಯಾರವರು ಏಪ್ರಿಲ್ 7 ಕ್ಕೆ ನೆಲ್ಲೂರ್ ತಲುಪಿ ಅಲ್ಲಿಂದ ಮಗನನ್ನು ಕರೆದುಕೊಂಡು ಪುನಃ ಏಪ್ರಿಲ್ 8 ಕ್ಕೆ ಯಶಸ್ವಿಯಾಗಿ ಭೋದಾನ್ ತಲುಪಿದ್ದಾರೆ.

1400 ಕಿಮೀ ಸುದೀರ್ಘ ಪ್ರಯಾಣದ ವೇಳೆ ದಾರಿಯಲ್ಲಿ ಹಲವು ಕಡೆ ಪೊಲೀಸರು ತನ್ನನ್ನು ನಿಲ್ಲಿಸಿ ಪ್ರಶ್ನಿಸಿದ್ದರೂ ಕೂಡ ಪೊಲೀಸರ ಪ್ರಮಾಣ ಪತ್ರ ತನ್ನ ಬಳಿ ಇದ್ದ ಕಾರಣ ಯಾವುದೇ ತೊಂದರೆ ಯಾಗಿಲ್ಲ ಎಂದು ರಝಿಯಾ ಹೇಳುತ್ತಾರೆ. ಪ್ರಯಾಣ ಅತ್ಯಂತ ಕಷ್ಟ ಕರ ಮತ್ತು ಕಾಡಿನ ದಾರಿಯದ್ದಾಗಿದ್ದರೂ ಕೂಡ ತನ್ನ ಮಗನ ಬಗ್ಗೆ ಮಾತ್ರ ನಾನು ಆ ಸಂದರ್ಭದಲ್ಲಿ ಯೋಚಿಸಿದ್ದ ಕಾರಣ ನನಗೆ ಕಷ್ಟವೂ ನನ್ನ ಅರಿವಿಗೆ ಬಂದಿಲ್ಲ ಎಂದು ಅವರು ಸೇರಿಸುತ್ತಾರೆ.

ವೃತ್ತಿಯಲ್ಲಿ ಸ್ಕೂಲ್ ಟೀಚರ್ ಆಗಿರುವ ರಝಿಯಾ ಬೇಗಂ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರ ಈ ಕಾರ್ಯವನ್ನು ಪೊಲೀಸರು ಹಾಗೂ ರಾಷ್ಟ್ರೀಯ ಮಾಧ್ಯಮಗಳು ಹೊಗಳಿದ್ದಾರೆ.

Leave a Reply