Breaking News
Madin Saleh

‘ಮದಾಯನ್ ಸಾಲೇಹ್’ ಪ್ರವಾದಿ ಸಾಲೇಹ್(ಅ)ರ ಜನಾಂಗ ಶಿಕ್ಷಿಸಲ್ಪಟ್ಟ ಐತಿಹಾಸಿಕ ಸ್ಥಳ

ಜಗತ್ತಿನಲ್ಲಿ ಎಣಿಸಲಾರದಷ್ಟು ರಹಸ್ಯಮಯ ಸ್ಥಳಗಳಿವೆ. ಅವುಗಳಲ್ಲಿ ಕೆಲವೊಂದರ ಇತಿಹಾಸ ನಮಗೆ ಗೊತ್ತಿಲ್ಲ. ಇನ್ನು ಕೆಲವು ಸ್ಥಳಗಳು ತಮ್ಮ ಇತಿಹಾಸವನ್ನು ಕೂಗಿ ಕೂಗಿ ಹೇಳುತ್ತಿವೆ. ಇಂತಹದ್ದೇ ಒಂದು ರಹಸ್ಯ ಮಯ ಐತಿಹಾಸಿಕ ಸ್ಥಳದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.

ಈ ಐತಿಹಾಸಿಕ ಸ್ಥಳ ಸೌದಿ ಅರೇಬಿಯಾದಲ್ಲಿದೆ. ಮದಾಯಿನ್ ಸಾಲೇಹ್ ಎಂಬ ಹೆಸರಲ್ಲಿ ಅರಿಯಲ್ಪಡುವ ಈ ಸ್ಥಳ ಸಾವಿರಾರು ವರ್ಷಗಳ ಹಿಂದೆ ನಾಗರಿಕತೆಯೊಂದರ ಬೀಡಾಗಿತ್ತು. ಪ್ರವಾದಿ ಸಾಲೇಹ್(ಅ) ರವರ ಜನಾಂಗವಾದ ಸಮೂದ್ ಜನಾಂಗದ ನಾಗರಿಕತೆಯಾಗಿತ್ತು ಅದು. ಈ ಜನಾಂಗವು ಅತೀ ಶಕ್ತಿವಂತ ಮನುಷ್ಯರನ್ನು ಹೊಂದಿತ್ತು ಎನ್ನಲಾಗುತ್ತದೆ. ಇವರು ಪರ್ವತಗಳನ್ನು ಕಡಿದು ಅದನ್ನು ಅಚ್ಚು ಕಟ್ಟಾಗಿ ಕೆತ್ತಿ ತಮ್ಮ ಮನೆಗಳನ್ನು ನಿರ್ಮಿಸಿ ಕೊಳ್ಳುತ್ತಿದ್ದರು. ಇದರ ಕುರುಹುಗಳನ್ನು ಇಂದಿಗೂ ಈ ಪ್ರದೇಶದಲ್ಲಿ ಕಾಣಬಹುದಾಗಿದೆ.

madain saleh
Image Source: Google Image | Image by: BBC

‘ಮದಾಯನ್ ಸಾಲೇಹ್’ ಇತಿಹಾಸ

ಇವತ್ತು ಬಂಜರು ಭೂಮಿಯಾಗಿರುವ ಈ ಪ್ರದೇಶದಲ್ಲಿ ಅಂದು ಬೇಕಾದಷ್ಟು ನೀರು ಹಾಗೂ ಕೃಷಿ ಮುಂತಾದ ಜೀವನಾವಶ್ಯಕ ವಸ್ತುಗಳು ವಿಫುಲವಾಗಿ ಲಭ್ಯವಿದ್ದವು. ಇದೇ ಕಾರಣದಿಂದಾಗಿ, ಈ ಜನರಿಗೆ ತಮ್ಮ ಅತಿಯಾದ ಶಕ್ತಿ ಮತ್ತು ಸಂಪತ್ತಿನ ದುರಹಂಕಾರವಿತ್ತು. ಹಾಗೂ ಇವರು ಜನರಿಗೆ ಅನ್ಯಾಯ ಮಾಡುತ್ತಿದ್ದರು. ಸೃಷ್ಟಿಕರ್ತನನ್ನು ಮರೆತು ಅನಾಚಾರ ಮಾಡುತ್ತಾ, ಅತೀ ದುರಹಂಕಾರಿ ಜನರಾಗಿ ಮೆರೆಯುತ್ತಿದ್ದರು. ಇದೇ ಸಮಯದಲ್ಲಿ ಅಲ್ಲಾಹನು ಈ ಸಮುದಾಯವನ್ನು ಸುಧಾರಿಸಲು ಅವರ ಮುಂದೆ ಅದೇ ಸಮುದಾಯದವರಾದ ಸಾಲಿಹ್ (ಅ)ರನ್ನು ಪ್ರವಾದಿಯಾಗಿ ನೇಮಿಸಿದನು.

ಹಝ್ರತ್ ಸ್ವಾಲಿಹ್ (ಅ)ರವರು ಈ ಸಮುದಾಯದ ಮುಂದೆ ಅಲ್ಲಾಹನ ಪ್ರವಾದಿ ಅರ್ಥಾತ್ ಸಂದೇಶವಾಹಕರಾಗಿ ಅಲ್ಲಾಹನ ಸಂದೇಶವನ್ನು ಅವರಿಗೆ ತಲುಪಿಸುತ್ತಾ ನಾನು ಅಲ್ಲಾಹನ ಪ್ರವಾದಿಯಾಗಿದ್ದು, ನೀವು ನನ್ನನ್ನು ಅನುಸರಿಸಿರಿ ಮತ್ತು ನಿಮ್ಮ ಕೆಟ್ಟ ಕೆಲಸಗಳಿಂದ ದೂರವಿರಿ ಎಂದು ಬೋಧಿಸಿದರು. ಆದರೆ, ಪ್ರವಾದಿ ಸ್ವಾಲಿಹ್(ಅ)ರವರ ಬೋಧನೆ ಆ ಸಮುದಾಯದ ಮುಂದೆ ಬಂಡೆ ಕಲ್ಲಿಗೆ ನೀರು ಸುರಿದಂತಾಯ್ತು.

ಉಲ್ಟಾ ಆ ಸಮುದಾಯದವರು ಪ್ರವಾದಿ ಸ್ವಾಲಿಹ್ ರನ್ನು ಉದ್ದೇಶಿಸಿ, ನೀವು ಅಲ್ಲಾಹನ ಪ್ರವಾದಿಯಾಗಿದ್ದರೆ ಆ ಕಾಣುವ ಬಂಡೆಯಿಂದ ಒಂದು ಹೆಣ್ಣು ಒಂಟೆಯನ್ನು ಹೊರಡಿಸು ಎಂದು ಚಾಲೆಂಜ್ ಮಾಡಿದರು. ಪ್ರವಾದಿ ಸ್ವಾಲಿಹ್ (ಅ) ರವರು ಅಲ್ಲಾಹನಲ್ಲಿ ಈ ಬಗ್ಗೆ ಪ್ರಾರ್ಥಿಸಿದಾಗ, ಅಲ್ಲಾಹನು ಬಂಡೆಕಲ್ಲಿನಿಂದ ಹೆಣ್ಣೊಂಟೆಯನ್ನು ಹೊರಡಿಸಿದನು. ಇದರ ಬಗ್ಗೆ ಕುರ್ ಆನಿನಲ್ಲಿ ಸುವ್ಯಕ್ತವಾಗಿ ಹೇಳಲಾಗಿದೆ.

ಸಮೂದ್ ಜನಾಂಗದೆಡೆಗೆ ಅವರ ಸಹೋದರ ಸ್ವಾಲಿಹ್ ರನ್ನು (ನಾವು ಕಳುಹಿಸಿದೆವು). ಅವರು ಹೇಳಿದರು: ‘ಓ ನನ್ನ ಜನರೇ! ನೀವು ಅಲ್ಲಾಹುವನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅನ್ಯ ಆರಾಧ್ಯರಿಲ್ಲ. ನಿಮ್ಮ ಪ್ರಭುವಿನ ವತಿಯಿಂದ ನಿಮ್ಮೆಡೆಗೆ ಸ್ಪಷ್ಟವಾದ ಒಂದು ಪುರಾವೆಯು ಬಂದಿದೆ. ಇದು ನಿಮಗೆ ದೃಷ್ಟಾಂತ ವಾಗಿರುವ ಅಲ್ಲಾಹುವಿನ ಒಂಟೆಯಾಗಿದೆ. ಆದ್ದರಿಂದ ಅದನ್ನು ಬಿಟ್ಟುಬಿಡಿರಿ. ಅದು ಅಲ್ಲಾಹುವಿನ ಭೂಮಿಯಲ್ಲಿ (ಮೇಯ್ದು) ತಿನ್ನಲಿ. ಅದಕ್ಕೆ ಯಾವುದೇ ಹಾನಿಯನ್ನೂ ಮಾಡದಿರಿ. ಹಾಗೇನಾದರೂ ಮಾಡಿದರೆ ಯಾತನಾಮಯ ಶಿಕ್ಷೆಯು ನಿಮ್ಮನ್ನು ಹಿಡಿದುಕೊಳ್ಳುವುದು. [ಕುರ್‌ಆನ್ 7:73]

ಕೆಲವು ಸಮಯ ಪ್ರವಾದಿ ಸ್ವಾಲಿಹ್ (ಅ) ಅವರ ಮಾತಿನಂತೆ ನಡೆದ ಅವರು ಆ ಒಂಟೆಗೆ ಯಾವುದೇ ಹಾನಿ ಮಾಡದೆ ಬಿಟ್ಟಿದ್ದರು. ಆದರೆ ದಿನಗಳೆದಂತೆ ಅವರ ಕೆಟ್ಟ ಬುದ್ದಿಯ ತಾಳ್ಮೆ ಯನ್ನು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಒಂದು ದಿನ ಆ ಹೆಣ್ಣೊಂಟೆಯನ್ನು ಆ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರು ಕೊಂದು ಹಾಕಿದರು. ಕೈದಾರ್ ಮತ್ತು ಕಝ್‌ದಾನಿ ಹೆಸರಿನ ಇಬ್ಬರು ಯುವಕರು ಈ ಕೃತ್ಯವನ್ನು ಎಸಗಿದ್ದರಾದರೂ, ಅವರ ಕೃತ್ಯಕ್ಕೆ ಬೆಂಬಲವಾಗಿ ಇಡೀ ಸಮೂದ್ ಸಮುದಾಯವೇ ಇತ್ತು. ಮೊದಲೇ ದುರಹಂಕಾರಿ ಜನಸಮುದಾಯವಾಗಿ ಮೆರೆಯುತ್ತಿದ್ದ ಈ ದೇವ ಧಿಕ್ಕಾರಿ ಸಮುದಾಯವು ಅಲ್ಲಾಹನ ಈ ದೃಷ್ಟಾಂತ ವಾಗಿರುವ ಒಂಟೆಯನ್ನು ಕೊಂದ ಬಳಿಕ ಅಲ್ಲಾಹನ ದೃಷ್ಟಿಯಲ್ಲಿ ಅತ್ಯಂತ ನಿಕೃಷ್ಟರಾದರು. ಆ ನಂತರ ಅಲ್ಲಾಹನು ಅವರ ವಿಷಯದಲ್ಲಿ ತನ್ನ ತೀರ್ಮಾಣವನ್ನು ಕೈಗೊಂಡನು. ಕುರ್‌ಆನಿನಲ್ಲಿ ಈ ಬಗ್ಗೆ ವಿವರಿಸಲಾಗಿದೆ.

ನಾವು ಅವರ ಮೇಲೆ ಒಂದು ಭಯಾನಕ ಶಬ್ದವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ನಿರ್ಮಿಸುವವನು ಬಿಟ್ಟು ಹೋಗುವ ಹುಲ್ಲಿನ ಕಡ್ಡಿಗಳಂತಾದರು. [ಕುರ್‌ಆನ್ 54:31]

ಇತಿಹಾಸ ತಜ್ಞರ ಅಭಿಪ್ರಾಯ

ಸಮೂದ್ ಜನಾಂಗ ವಾಸಿಸುತ್ತಿದ್ದ ಈ ಸ್ಥಳದಲ್ಲಿ ಭಯಾನಕ ಭೂಕಂಪ ಎರಗಿತ್ತು ಎನ್ನುತ್ತಾರೆ. ಇನ್ನು ಕೆಲವರು ಅಲ್ಲಿಗೆ ಸೌರ ಮಂಡಲದಿಂದ ಒಂದು ಭಯಾನಕ ಶಬ್ದವು ಬಂದು ಎರಗಿತ್ತು ಎನ್ನುತ್ತಾರೆ. ಈ ಬಗ್ಗೆ ಇತಿಹಾಸಕಾರರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಒಟ್ಟಿನಲ್ಲಿ ಆ ಜನಾಂಗದ ಮೇಲೆ ದೈವಿಕ ಶಿಕ್ಷೆ ಎರಗಿರುವುದಂತೂ ಸತ್ಯ. ಅವರು ಅವರ ಮನೆಗಳ ಒಳಗೇ ಹೆಣವಾಗಿದ್ದರು. ಇದರ ಕುರುಹುಗಳಾಗಿ ಈ ಬಂಡೆಕಲ್ಲುಗಳನ್ನು ಕೊರೆದು ನಿರ್ಮಿಸಲಾಗಿರುವ ಮಹಲುಗಳ ಒಳಗೆ ಇಂದಿಗೂ ಮಾನವ ಮೂಳೆಗಳು ಲಭ್ಯವಿದೆ.

ಪ್ರವಾದಿ ಮುಹಮ್ಮದ್(ಸ)ರ ಅಭಿಪ್ರಾಯ

ತಬೂಕ್ ಯುದ್ಧದ ದಿನಗಳಲ್ಲಿ ಪ್ರವಾದಿ ಮುಹಮ್ಮದ್(ಸ)ರವರು ತಮ್ಮ ಅನುಚರರೊಂದಿಗೆ ಈ ಪ್ರದೇಶದಿಂದ ಹಾದು ಹೋಗುತ್ತಿರುವಾಗ, ಪ್ರವಾದಿಯವರು ತಮ್ಮ ಅನುಚರರಿಗೆ ಈ ಸ್ಥಳದ ಬಗ್ಗೆ ಮಾಹಿತಿ ನೀಡಿದರು. ಮತ್ತು ಇಲ್ಲಿಂದ ಹಾದು ಹೋಗುವಾಗ ವೇಗವಾಗಿ ಹೋಗಿ ಎಂದೂ ಸಲಹೆ ನೀಡಿದರು. ಏಕೆಂದರೆ, ಈ ಸ್ಥಳ ಒಂದು ಸಮುದಾಯವನ್ನು ಶಿಕ್ಷಿಸಲಾಗಿರುವ ಸ್ಥಳವಾಗಿದೆ. ಇಲ್ಲಿ ನೀವು ಭೇಟಿ ನೀಡುವುದಾದರೆ ನಿಮಗೆ ಇಲ್ಲಿನ ಸ್ಥಿತಿಯನ್ನು ನೋಡಿ ಅಳುವಂತಿರಬೇಕು. ಅದರ ಹೊರತು ನೀವು ಇಲ್ಲಿಗೆ ಭೇಟಿ ನೀಡಲೇ ಬಾರದು ಎಂದು ಹೇಳಿದರು.

ಆಧುನಿಕ ಯುಗದಲ್ಲಿ ಪ್ರವಾಸ ಸ್ಥಳ

ಆದರೆ ಇಂದು ಕಾಲ ಬದಲಾಗಿದೆ. ಜನ ಇಲ್ಲಿಗೆ ಪ್ರವಾಸ ಹೊರಡುತ್ತಿದ್ದಾರೆ. ಸೌದಿ ಸರಕಾರವು ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಷ್ಟಾಗಿ ಅಭಿವೃದ್ಧಿ ಪಡಿಸಿಲ್ಲವಾದರೂ, ಇಲ್ಲಿಗೆ ಭೇಟಿ ನೀಡುವವರಿಗೇನೂ ಕಡಿಮೆ ಇಲ್ಲ. ಈದ್ ಮುಂತಾದ ಹಬ್ಬಗಳ ಸಂಧರ್ಭದಲ್ಲಿ ಈ ಪ್ರದೇಶ ವಿದೇಶಿ ಪ್ರವಾಸಿಗಳಿಂದ ತುಂಬಿರುತ್ತದೆ. ಈ ಪ್ರವಾಸಿಗಳಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು.

qasr al farid
Image Source: Google Image | Image by: flickr

ಇಲ್ಲಿರುವ ಪರ್ವತದ ಮಹಲುಗಳ ಪೈಕಿ ‘ಕಸ್ರ್ ಅಲ್ ಫರೀದ್’ ತುಂಬಾ ಫೇಮಸ್. 2008 ರಲ್ಲಿ ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಈ ಸ್ಥಳಕ್ಕೆ ‘ ಅಲ್ ಹೆಗ್ರಾ’ ಎಂದೂ ಕರೆಯುತ್ತಾರೆ. ಅಲ್ ಉಲಾ ಪಟ್ಟಣದಿಂದ ಉತ್ತರಕ್ಕೆ 20 ಕಿಮೀ ಹಾಗೂ ಮದೀನಾ ಪಟ್ಟಣದಿಂದ ವಾಯುವ್ಯಕ್ಕೆ 400 ಕಿಮೀ ದೂರದಲ್ಲಿ ಈ ಸ್ಥಳವಿದೆ. ಒಟ್ಟೋಮನ್ ಕಾಲದಲ್ಲಿ ಈ ಪ್ರದೇಶದ ಮೂಲಕವಾಗಿ ಹಜ್ ಯಾತ್ರೆಗೆ ಹೊರಡಲು ರೈಲು ಹಳಿಗಳನ್ನೂ ನಿರ್ಮಿಸಲಾಗಿತ್ತು. ಈಗಲೂ ಇಲ್ಲಿ ಹಳೆಯ ಕಾಲದ ಉಗಿ ಬಂಡಿಯ ಅವಶೇಷ ಹಾಗೂ ಹಳೆಯ ಕಾಲದ ಪಾಲು ಬಿದ್ದ ರೈಲ್ವೇ ಸ್ಟೇಷನನ್ನು ಕಾಣಬಹುದಾಗಿದೆ.

Leave a Reply